Skip to main content

ಅಭಾವಗಳ ಹಾವ-ಭಾವ

ಈಗಿನ ಕಾಲದಲ್ಲಿ ಅಭಾವ ಎನ್ನುವ ಪದದ ಅರ್ಥ ಬದಲಾಗಿದೆ. ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವ ಅಭಾವವೆಂದರೆ ಸಮಯದ್ದು. ಎರಡುಬಾರಿ ಯೋಚನೆಮಾಡಿ ಮಾತನಾಡಲೂ ಆಗದ ಈ ಕಾಲದಲ್ಲಿ, ಹೇಳಿದ ನಂತರ ಆದ ಗಲಭೆಯನ್ನು ನಿಯಂತ್ರಿಸುವ ಸಮಯದ ಲೆಕ್ಕ ಯಾರು ತಾನೆ ಇಡುತ್ತಾರೆ ಹೇಳಿ. ನಾವು ಚಿಕ್ಕವರಿದ್ದಾಗ ಸಮಯಕ್ಕೆ ಎಂದೂ ಅಭಾವವಿರಲಿಲ್ಲ, ನಮಗೆ ತಿನ್ನಲು, ಆಡಲು, ಓದಲು ಎಲ್ಲವುದಕ್ಕೂ ಸಮಯವಿರುತ್ತಿತ್ತು. ಈಗಿನ ಕಾಲದಲ್ಲಿ ನಮಗೆ ಸೀರಿಯಲ್ ನೋಡೋದಕ್ಕೇ ಸಮಯ ಇರೋದಿಲ್ಲ್ಲ, ಇದಕ್ಕೆ ಅನುಗುಣವಾಗಿ ನಮ್ಮನ್ನು ಹಾಳುಗೆಡವಲು ಅನೇಕಾನೇಕ ಕೊಳ್ಳುಬಾಕತನವೆಂಬ ರಂಭೆ, ಸೋಂಬೇರಿತನವೆಂಬ ಊರ್ವಶಿ, ಸುಖದ ಸೋಪಾನದಲ್ಲಿ ಮಲಗಿಸುವ ಸವಲತ್ತುಗಳು ಎಂಬ ಮೇನಕೆಯರು, ನಮ್ಮ ಜೀವನದ ಸಮತೋಲನದ ತಪಸ್ಸನ್ನು ಏರು ಪೇರು ಮಾಡಲು ಕಾಯುತ್ತಿರುತ್ತವೆ.

ಅಭಾವಗಳನ್ನೇ ಬಂಡವಾಳಮಾಡಿಕೊಂಡಿರೋ ಉದ್ದಿಮೆಗಳೇ ಹೆಸರುಮಾಡುತ್ತಿರುವ ಈ ಸಮಯದಲ್ಲಿ, ಮನೆ ಕೆಲಸಗಾರರು ಸಿಗದಿದ್ದರೇನಂತೆ, ನಿಮ್ಮನ್ನು ಇನ್ನಷ್ಟು ಸೋಂಬೇರಿಯನ್ನಾಗಿ ಮಾಡಲು ಯಂತ್ರೋಪಕರಣಳು ಬೇರೆ. ಬೆಳಿಗ್ಗೆ ಒಮ್ಮೆ ಅಡುಗೆ ಮಾಡಿದರೆ ಸಾಕು ಮಾರನೆದಿನ ಬೆಳಿಗ್ಗೆವರೆಗು ಯೋಚನೆ ಮಾಡೊಹಾಗಿಲ್ಲ. ತಂಗಳನ್ನು ಬಿಸಿಮಾಡಲು ಮೈಕ್ರೋವೇವ್ ಒವನ್, ಬೇಗ ಅಡುಗೆ ಮಾಡಲು ರೆಡಿಮಿಕ್ಸ್‍ಗಳು, ಅಡುಗೇನೇ ಮಾಡಲು ಬೇಜಾರೇ ಯೋಚನೇನೇ ಮಾಡಬೇಡಿ ಕೆ.ಜಿ.ಲೆಕ್ಕದಲ್ಲಿ ಅಡುಗೆ ಸಿಗತ್ತೆ. ಹಬ್ಬ ಹರಿದಿನವೇ? ಅದಕ್ಕೂ ಯೋಚನೆ ಬೇಡ, ಮನೆಗೆ ಶಾಸ್ತ್ರಿಗಳು ಬರೋದು, ಅವರಿಗೆ ವ್ಯವಸ್ಥೆ ಮಾಡೋದು ಇದೆಲ್ಲ ತುಂಬಾ ಕಷ್ಟ, ಪೂಜೆ ಸಿ.ಡಿ.ತನ್ನಿ ಪ್ಲೇಯರ್‍ನಲ್ಲಿ ಹಾಕಿ, ಅವರು ಹೇಳಿದ್ದನ್ನು ಅನುಸರಿಸಿ, ಸ್ವಲ್ಪ ಫಾಸ್ಟ್ ಅನ್ನಿಸಿದರೆ ಪಾಸ್ ಮಾಡಿ ಮಂಗಳಾರತಿ ಮಾಡಿ.

ಇಷ್ಟೆಲ್ಲಾ (ಅ)ವ್ಯವಸ್ಥೆಗಳು ನಿಮ್ಮನ್ನು ಸೊಂಬೇರಿಯನ್ನ ಮಾಡುವುದಕ್ಕೆ ಮುಂದಾಗಿರುವಾಗ, ನಿಮ್ಮನ್ನು ಈ ತರಹದ ಅವಲಂಬನೆಯನ್ನು ಮುಂದಿಟ್ಟು, ಅದರಿಂದಾಗುವ ದುಶ್ಪರಿಣಾಮಗಳನ್ನು ಹೆಸರಿಸಿ, ನಿಮ್ಮನ್ನು ಹೆದರಿಸಿ ದುಡ್ಡುಮಾಡುವ ಕೆಲಸ ಕೂಡ ಕೆಲ ಕಂಪೆನಿಯವರು ಮಾಡುತ್ತಾರೆ. ಡಯಟ್‍ಮಾಡಿ, ಎಕ್ಸ್‍ರ್‍ಸೈಜ್‍ಮಾಡಿ, ಮೊದಲು ಹೀಗಿದ್ದ ಡುಮ್ಮಿ ನೋಡಿ ನಮ್ಮ ಉತ್ಪಾದನೆಯ ಬಳಕೆಯಿಂದ ಹೇಗೆ ಚಿತ್ರನಟಿತರಹ ಆಗಿದ್ದಾಳೆ ಎಂದೆಲ್ಲಾ ಆಮಿಶ ಒಡ್ಡುತ್ತಾರೆ. ಗಂಡಂದಿರು ಬಾಯ್‍ಪ್ರೆಂಡ್ಸ್ ಇದನ್ನೇ ಮಾದರಿಯಾಗಿಟ್ಟು ನಮ್ಮನ್ನ ಮೂದಲಿಸುತ್ತಾರೆ. ಅಭಾವಗಳನ್ನು ಎತ್ತಾಡದೆ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುವುದೇ ಅಸಾಧ್ಯ ಎಂದು ಇಂದಿನ ಕಂಪೆನಿಗಳು ನಂಬಿರುವಹಾಗಿದೆ. ಹೆಂಗಸರ ಸೋಪ್‍ನಿಂದ ಹಿಡಿದು ಸೌಂದರ್ಯವರ್ಧಕಗಳನ್ನು ಮಾರಲು ನಿಮಗೆ ಸೌಂದರ್ಯದ ಅಭಾವ ಇದೆ ಎನ್ನುತ್ತಾರೆ, ಇಟಾಲಿಯನ್ ಸಿಧ್ಧ ಅಡುಗೆ ಮಾರುವವರು ಅಥವಾ ಸಿದ್ಧ ಉಡುಪು ಮಾರುವವರು ನಿಮಗೆ ಅಭಿರುಚಿಯ ಅಭಾವವಿದೆ ಎನ್ನುತ್ತಾರೆ, ದೇವರ ಬಗ್ಗೆ ಜಾಗ್ರತಿ ಮೂಡಿಸಲು ನಿಮಗೆ ಭಕ್ತಿಯ ಅಭಾವವಿದೆ ಎನ್ನುತ್ತಾರೆ, ಅಭಾವಗಳನ್ನ ಬಂಡವಾಳಮಾಡಿಕೊಳ್ಳದಿರುವ ಉದ್ದಿಮೆಯೇ ಇಲ್ಲ ಎನ್ನುವುದು ಅತಿಶಯೋಕ್ತಿಯೇನಲ್ಲ. ಎಚ್ಚರವಿರಲಿ, ಅಪ್ಪಿ ತಪ್ಪಿ ನೀವೇನಾದರೂ ನನಗೆ ಯಾವುದರ ಅಭಾವವೂ ಇಲ್ಲ ಎಂದಲ್ಲಿ, ನೀವು ನಗೆಪಾಟಲಿಗೀಡಾಗುತ್ತೀರ ಹುಶಾರ್...

ಅಭಾವಗಳ ಸಂತೆ ಇಷ್ಟಕ್ಕೇ ಮುಗಿಯುವುದಿಲ್ಲ, ಇದು ಎಲ್ಲರಿಗೂ ಕಾಡುವ ದಿನಬಳಕೆ ಪದ. ಶ್ರೀಮಂತರಿಗೆ ಆರೋಗ್ಯದ ಅಭಾವ, ಬಡವರಿಗೆ ಊಟದ ಅಭಾವ, ಮಧ್ಯಮ ವರ್ಗದವರಿಗೆ ಸೌಲಭ್ಯಗಳ ಅಭಾವ, ಸರಕಾರಕ್ಕೆ ಬಹುಮತದ ಅಭಾವ, ಉದ್ದಿಮೆದಾರರಿಗೆ ಬ್ಯಾಂಕ್ ಲೋನಿನ ಅಭಾವ, ಬ್ಯಾಂಕಿನವರಿಗೆ ಹೆಚ್ಚು ಹಣಮಾಡಲು ಗ್ರಾಹಕರ ಅಭಾವ. ಅಭಾವ ನನ್ನ ಪ್ರಕಾರ ಈ ಶತಮಾನದ ಅತಿ ಹೆಚ್ಚು ಯೋಚನೆಗೀಡುಮಾಡುವ ಪದ.

ಕೆಲವು ಅಭಾವಗಳು ಪಿತ್ರಾರ್ಜಿತ, ಉದಾಹರಣೆಗೆ ತಂದೆ ಮಾಡಿಟ್ಟ ಸಾಲ, ವಂಶಪಾರಂಪರೆಯ ಪ್ರಕಾರ ಅನುಸರಿಸುವ ರೀತಿ ರಿವಾಜುಗಳು, ಬಳುವಳಿಯಾಗಿ ಬರುವ ಖಾಯಿಲೆಗಳು ಕೂಡ ಈ ಸಾಲಿಗೆ ಸೇರುತ್ತದೆ. ಕೆಲವು ಅಭಾವಗಳು ಸ್ವಯಾರ್ಜಿತ, ಇ.ಎಮ್.ಐ. ಬಲೆಗೆ ಬೀಳುವುದು, ಅತಿಯಾದ ಕೊಳ್ಳುಬಾಕತನದಿಂದ ಹೆಚ್ಚಾಗುವ ಹಣದ ಅಭಾವ, ಸಮಯವಿಲ್ಲದೆ ಬೆಳೆಯುವ ಸಂಬಂಧಗಳ ಅಭಾವ.

ಸಂಬಂಧಗಳ ಅಭಾವ ಎಂದಾಗ ಮನೆಯಲ್ಲಿ ನಡೆಯುವ ಸಲ್ಲಾಪಗಳು ಮತ್ತು ಅದರ ಗಹನತೆಯಬಗ್ಗೆ ಯೋಚನೆ ಹರಿಯುವುದು. ಮೊದಲು ನಡೆಯುತ್ತಿದ್ದ ಪತಿ ಪತ್ನಿಯರ ನಡುವಿನ ಸರಸಸಲ್ಲಾಪಗಳು ಇಂದು ಎಸ್.ಎಂ.ಎಸ್‍ಗೆ ಸೀಮಿತವಾಗಿವೆ, ಇರವುದೆಲ್ಲವ ಬಿಟ್ಟು ಇರದುದರೆಡೆಗೆ ನಮ್ಮನ್ನು ನೂಕುತ್ತಿದೆ ಈ ಸಂಬಂಧಗಳ ಅಭಾವ. ಬೆಂಗಳೂರಿನಲ್ಲಿ ಸಂಬಳಕ್ಕೆ ಕೆಲಸಮಾಡುವ 80% ಜನ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾರೆ. ಅಭಾವಕ್ಕೆ ಬಸಿರಾದ ಎಲ್ಲ ಜೋಡಿಗಳೂ ತಮ್ಮ ಜೀವನಶೈಲಿಯನ್ನು ಉತ್ತಮಗೊಳಿಸುವ ಸಲುವಾಗಿ ಇಬ್ಬರೂ ಕೆಲಸದಲ್ಲಿ ನಿರತರಾಗಿರುತ್ತಾರೆ. ಇದೇ ದುಡ್ಡುಮಾಡುವ ದುರಾಸೆಯಿಂದ ಅವರು ಕೆಲಸಮಾಡುವ ಕಂಪೆನಿಯವರೂ ಕೂಡ ಬೋನಸ್, ಪ್ರಮೋಷನ್ ಮತ್ತು ವಿದೇಶಿ ಪ್ರವಾಸದ ಆಮಿಷಗಳನ್ನು ಒಡ್ಡಿ ಹೆಚ್ಚೆಚ್ಚು ಕೆಲಸ ತೆಗೆಯುತ್ತಾರೆ. ಇದರ ಪ್ರಥಮ ಸಂತಾನವೇ ವರ್ಕ್ ಫ್ರಮ್ ಹೋಂ ಎಂಬ ಹೊಸಾ ಹುಳ. ಆಫೀಸಿನಲ್ಲಿ ಕೆಲಸ ಮಾಡಿದ್ದು ಸಾಲದೆಂಬಂತೆ ಮನೆಯಲ್ಲಿ ಸಂಗಾತಿಯ ಜೊತೆ, ಮಕ್ಕಳ ಜೊತೆ ಕಳೆಯಬೇಕಾದ ಸಮಯದಲ್ಲಿ ಕೂಡ ಈಗ ಕೆಲಸದ ಒತ್ತಡ ಜೊತೆಗೆ ಸಮಯದ ಅಭಾವ. ದೂರವಿರುವ ಜೋಡಿಗಳ ಝೇಂಕಾರ ಅಂತರ್ಜಾಲದ ಸ್ಕೈಪ್, ವಾಟ್ಸಾಪ್‍ಗೆ ಸೀಮಿತವಾಗಿರುವುದು ಎಂಥ ವಿಪರ್ಯಾಸ. ಲಾಲ್ ಬಾಗ್‍ಗೆ ಹೋಗಿ, ಕಳ್ಳೆ ಕಾಯಿ ತೊಗೊಂಡು ಜೊತೆಗೆ ನಿಧಾನವಾಗಿ ನಡೆದು ಮನೆಗೆ ಬರುವಾಗ ಒಂದು ಬೈಟೂ ಕಾಫಿ ಕುಡಿಯುವುದರಿಂದ ಈ ಸಂಬಂಧದ ಅಭಾವ ಕಡಿಮೆಯಾಗುವುದು ಎಂಬ ಸತ್ಯ ಅರಿವಾಗುವುದರಲ್ಲಿ ಇಲ್ಲಾ ವಯಸ್ಸಾಗಿರತ್ತೆ, ಇಲ್ಲಾ ಒಡನಾಟ ಮುಗಿದಿರುತ್ತದೆ.

ಎಲ್ಲಾ ಹೆಂಡತಿಯರೂ ಟಿ.ವಿ.ನೋಡುತ್ತಿರುವ ಗಂಡಂದಿರ ಬಳಿ ಐದು ನಿಮಿಷ ಮಾತನಾಡಿದ ಮೇಲೆ ಆತ ಹೆಂಡತಿ ಹೇಳಿದ ಮಾತುಗಳಲ್ಲಿನ ಒಂದು ಅಂಶವೂ ಕಿವಿಮೇಲೆ ಹಾಕಿಕೊಂಡಿಲ್ಲ ಎನ್ನುವ ಸತ್ಯವನ್ನು ಅರಿತಿಲ್ಲ, ಜಗಳ ಆಡಿಲ್ಲ. ಆದರೆ ಕೆಲವು ಹೆಂಗಸರು ಈ ಗಂಡಂದಿರ ಕೆಟ್ಟ ಅಭ್ಯಾಸವನ್ನ ತಮ್ಮ ಅನುಕೂಲತೆಗೆ ಸೂಕ್ತವಾಗುವಂತೆ ಕೂಡ ಬಳಸಿಕೊಂಡಿರೋ ನಿದರ್ಶನಗಳುಂಟು. ಟಿ.ವಿ. ನೋಡುವಾಗ ತಮಗೆ ಬೇಕಾದ ಒಪ್ಪುಗೆಗಳನ್ನು ಗಂಡನ ಕಿವಿಗೆ ಹಾಕಿ ತಮಗೆ ಬೇಕಾದ ಒಡವೆಗಳನ್ನ ಪಡೆದುಕೊಳ್ಳುವುದು, ದುಬಾರಿ ಸೌಂದರ್ಯವರ್ಧನೆ ಮಾಡಿಸಿಕೊಳ್ಳುವುದು, ಹೊಸಾ ಸೀರೆ ಕೊಂಡುಕೊಳ್ಳುವುದು ಇತ್ಯಾದಿಗಳನ್ನು ಮಾಡಿರೋ ಕಥೆಗಳನ್ನು ನಾನೂ ಕೇಳಿದ್ದೀನಿ. ಹೀಗೆ ಸಂಬಂಧದ ವೈಪರೀತ್ಯಗಳನ್ನ ನಾವು ಅಭಾವುಕವಾಗಿಯೂ ಭಾವುಕವಾಗಿಯೂ ಬಳಸಿಕೊಳ್ಳುತ್ತಿರೋದು ಒಂದುರೀತಿ ಒಳ್ಳೆಯದೇ ಎನ್ನಬಹುದು.

ಹಾಳಾಗದ ಹಳೇ ಬೆಂಗಳೂರಿನ ಅಜ್ಜಿ ಮನೆ ತಾರಸಿ ಮೇಲೆ, ನಮ್ಮ ಅಜ್ಜಿ ನಮ್ಮನ್ನೆಲ್ಲಾ ಕಲೆಹಾಕಿ ಚಂದ್ರನ ಬೆಳದಿಂಗಳಲ್ಲಿ ನಮ್ಮ ಕೈಗಳು ತುಂಬಿ ತುಳುಕೊ ಥರಹ ಕೈತುತ್ತನ್ನು ಹಾಕಿ, ಸಾಕು ಸಾಕೆಂದರೂ ಬಿಡದೆ, ರುಚಿ ಹೆಚ್ಚಿಸಲು ಉಪ್ಪಿನಕಾಯಿ, ಚಟ್ನಿ ಪುಡಿ, ಗೊಜ್ಜುಗಳನ್ನು ಸುಲಲಿತವಾಗಿ ರುಚಿಗೆ ತಕ್ಕಷ್ಟು ಪ್ರತೀ ತುತ್ತಿನಲ್ಲೂ ಹುದುಗಿಸಿ ತುತ್ತಿನ ಮೇಲೆ ತುತ್ತು ತಿನ್ನಿಸುತ್ತಿದ್ದಳು. ಆಗಲೇ ತಿಂದಿರೋ ತಿಳಿ ಸಾರು ಅನ್ನದ ಜೊತೆಗಿನ ಅಕ್ಕಿ ಹಪ್ಪಳ, ಸಂಡಿಗೆ ಜಾಸ್ತಿಆಯ್ತು ಅಜ್ಜಿ ಎಂದರೂ ನಮ್ಮ ಮಾತಿಗೆ ಗಮನ ಕೊಡದೆ, ಲೇ ಅದೇನ್ ತಿಂತೀಯೆ ನೀನು, ಎಷ್ಟು ಸೊರಗಿಹೋಗಿದೀಯ ಬಂಗಾರಿ ಎನ್ನುತ್ತಾ ಮೊಸರನ್ನದ ಒಳಗೆ ಮೆಣಸಿನಕಾಯಿ ಬಾಳ್‍ಕಾದ ತುಂಡನ್ನು ಸಿಲುಗಿಸಿ ನಮ್ಮ ಕೈಗೆ ಇಡುತ್ತಿದ್ದಳು. ಆಗ ನಮ್ಮ ಅಜ್ಜಿಗೆ ಒಂದು ಸಣ್ಣ ಥ್ಯಾಂಕ್ಸ್ ಅಥವಾ ಕೆನ್ನೆಯಮೋಲೊಂದು ಮುತ್ತನಿತ್ತು ಧನ್ಯವಾದ ಮಾಡೋಣ ಎನ್ನುವ ಕಕುಲಾತಿ ನಮಗಿರಲಿಲ್ಲ. ಆಕಿಯ ಕೈ ತುತ್ತನ್ನು ತಿಂದು ತೇಗಿ ಅಲ್ಲಿಂದ ಖುಶಿಯಿಂದ ಎದ್ದರೆ ಅದೇ ಆ ಅಜ್ಜಿಗೆ ಬೇಕಾದ ಥ್ಯಾಂಕ್ಸ್. ಆದರೆ ಈಗಿನ ಮಕ್ಕಳು ಹಾಗಲ್ಲ, ಅವರು ಬೆಳೆಯುತ್ತಿರುವ ಅಭಾವದ ಕಾಲದಲ್ಲಿ ಪ್ರೀತಿಯನ್ನೂ ಕೇಳಿಪಡೆಯುವ ಅನಿವಾರ್ಯತೆ ಇದೆ. ತಲೆ ಬಾಚಿದಮೇಲೆ ಥ್ಯಾಂಕ್ಸ್ ಅಜ್ಜಿ ಎಂದೇ ಎನ್ನುತ್ತವೆ ಮಕ್ಕಳು. ಅಜ್ಜಿಗೆ ಕನ್ನಡಕ ತಂದು ಕೊಟ್ಟ ಮೊಮ್ಮಗು ಅಜ್ಜಿ ಥ್ಯಾಂಕ್ಸ್ ಹೇಳು ಎಂದು ತನ್ನ ಕೆಲಸದ ಶುಲ್ಕ ವಸೂಲಿ ಮಾಡುತ್ತದೆ. ಅರಳು ಸಂಡಿಗೆ ಮಾಡಿ ಕೊಡೊಣವೆಂದಾಗ ಅಜ್ಜಿ ನೀನು ಓಲ್ಡ್ ಸ್ಟಾಯ್ಲ್ ಅಡುಗೆ ಮಾಡಬೇಡ, ನನಗೆ ಚಿಪ್ಸ್ ಬೇಕು, ನಿನ್ನ ಉಪ್ಪಿಟ್ಟು ಬೇಡ ಪಾಸ್ತಾ ಬೇಕು ಎಂದು ಈಗಿನ ಮಕ್ಕಳು ಉಲಿಯುತ್ತವೆ.

ನಮ್ಮ ಅಜ್ಜಿ ಕಾಲದಲ್ಲಿ ಏನೇ ಅಭಾವ ಇರಲಿ ಸಂಸಾರಕ್ಕೆ ಎಂದೂ ತೊಂದರೆಯಾಗದಂತೆ ನಮಗ್ಯಾರಿಗೂ ಅಭಾವಗಳ ಸೋಗು ಮುಟ್ಟದಂತೆ ನೋಡಿಕೊಳ್ಳುತ್ತಿದ್ದಳು. ಈಗ ಅಭಾವ ಕಾಣುವುದೇ ತಡ ಅದನ್ನು ನಿವಾರಿಸಲು ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯರಾಗುತ್ತಾರೆ. ಬೆರಳಲ್ಲಿ ಕುರುವಾದರೆ ಕೈಯನ್ನು ಕಡಿದಂತೆ, ಖರ್ಚನ್ನು ಸರಿದೂಗಿಸದೆ ಅಥವಾ ಸರಿ ಬೆಸವನ್ನ ಹೊಸೆಯದೆ ಚಿನ್ನದ ಮೇಲಿನ ಸಾಲದಿಂದ ಹಿಡಿದು ಚೀಟೀವ್ಯವಹಾರದ ಕೈಸಾಲದ ಮೊರೆ ಹೋಗುವುದು ಸರ್ವೇ
ಸಾಮಾನ್ಯವಾಗಿದೆ. ಅಭಾವವನ್ನ ಒಂದು ಸಮಸ್ಯೆಯಾಗಿ ಪರಿಗಣಿಸದೆ ಅದನ್ನ ಒಂದು ಸಾಮಾಜಿಕ ಕೈಗನ್ನಡಿ ಮಾಡಿ ಅದರಿಂದ ಹೆದರದೆ ಅದನ್ನ ಸಕಾಲಿಕವಾಗಿ ನಿರ್ವಹಿಸಿ ಜೀವನವನ್ನ ದುರುಸ್ತುಪಡಿಸುವುದು ಸಮಯೋಜಿತ ಎಂದೇ ನನ್ನ ಅನಿಸಿಕೆ.

ಈ ಸಂಬಂಧದ ಅಭಾವಕ್ಕೆ ನಾವು ಇತರರನ್ನು ದೂಶಿಸದೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವುದು ಪ್ರಥಮ ಕರ್ತವ್ಯ. ಹಿರಿಯರು ಹೇಳುತ್ತಿದ್ದ ಹಾಗೆ ಸಂತೋಷವಾಗಿರುವನಿಗೆ ದುಃಖವಿಲ್ಲ, ಅವನಿಗೆ ಜೀವನದ ಸರಿಯಾದ ಮೌಲ್ಯದ ಅರಿವಿರುತ್ತದೆ. ನಮ್ಮ ಸಂಬಂಧಗಳು ನಮ್ಮ ಕೈನಲ್ಲಿವೆ, ಒಂದೇ ಕೈನಲ್ಲಿ ಚಪ್ಪಾಳೆ ತಟ್ಟಲು ಆಗುವುದಿಲ್ಲ, ಹಾಳಾದ ಸಂಬಂಧದ 50% ಕಾರಣ ನಾವೇ ಆಗಿರುತ್ತೇವೆ. ಸಂತೋಷವಾಗಿರುವುದು ನಮ್ಮ ಜನ್ಮಸಿಧ್ದ ಅಧಿಕಾರ, ನಮ್ಮ ಸಂತೋಷವನ್ನ ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂಬ ಸಕಾರಾತ್ಮಕ ತಾಟಸ್ಥ್ಯವನ್ನ ಬೆಳಸಿಕೊಂಡಲ್ಲಿ ನಮ್ಮ ಸಂಭಂದದ ಅಭಾವವನ್ನ ನಾವು ಕಳೆದುಕೊಳ್ಳಬಹುದು.


Comments

Popular posts from this blog

ಸಂವಿ ಹೇಳಿಕೊಟ್ಟ ಪಾಠಗಳು | Tribute to Sanchari Vijay

ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ. ಸಂವಿ ಹೇಳಿಕೊಟ್ಟ ಪಾಠಗಳು ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ.  ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ.  ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ...

I The Revenant!! (I live to tell the tale)

I really have no idea what to title this, tryst with destiny, final minutes, death at doorstep, light after darkness, reincarnation, second life, how I cheated death, My Life = 1300 Rs, I The Revenant, Sea rescue... But I am sure why I am writing this, I do not want to forget anything which happened on this day. It was early hours of Sunday, December 18, 2016, day after we had Mahpeede Mahablu show in Baindur.  We wanted to go to the beach till sun rises, come back get ready and leave to Bangalore at any cost before 10 AM after breakfast at 9 AM.  So we slept late, since we were in the same beach till 11 PM.  We went in at around 6.30 AM and tried to get into the sea at point 2 in the image below.  Later we realised that the current here is too much of the Sumana or Baindur river, force of the river was enough to make the sea water less salty.  This is clear sign that the current is super strong.  Looking for a suitable location, we moved to location...

Readers in Home Theatre 1

ಹೋಮ್ ಥೀಯೇಟರ್ ಒಂದನೇ ಪುಸ್ತಕದ ಅಧ್ಯಾಯಗಳು ಮತ್ತು ಅದನ್ನು ಓದಿದವರು. ಎಲ್ಲರಿಗೂ ನಮ್ಮ ಧನ್ಯವಾದಗಳು. Video Index: 1 ಜೋಗಿ - ದಯವಿಟ್ಟು ಈ ಪುಸ್ತಕ ಓದಬೇಡಿ - 0:12 2 ಟಿಏನ್ ಸೀತಾರಾಮ್ - ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ - 3:26 3 ಭಾವನಾ - ಒಂದು ಪ್ರೇಮದ ಕಥೆ - 7:14 4 ರಿಷಬ್ ಶೆಟ್ಟಿ - ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? - 11:09 5 ಸುಮನ್ ನಗರ್ಕರ್ - ಲೈಫ್ಒಂದು ಪಾಸ್‍ವರ್ಡು - 13:21 6 ರಿಷಿ - ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ - 16:28 7 ರಾಧಿಕಾ ನಾರಾಯಣ್ - ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? - 19:54 8 ವಸಿಷ್ಠ ಸಿಂಹ - ಲ್ಯಾಪ್ಟಾಪ್ ಮತ್ತು ಪ್ರೀತಿ! - 21:54 9 ಹರ್ಷಿಕಾ ಪೂಣಚ್ಚ - ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! - 23:47 10 ಪ್ರಮೋದ್ ಶೆಟ್ಟಿ - ಎಲ್ಲಾ ಮರೆತು ಚಪ್ಪಾಳೆ ತಟ್ಟಿ - 26:11 11 ಸಂಯುಕ್ತ ಹೊರನಾಡ್ - ಸೀಟ್ ಫಿಲಾಸಫಿ - 29:08 12 ಸಿಹಿ ಕಹಿ ಚಂದ್ರು - ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ - 31:48 13 ಮಂಡ್ಯ ರಮೇಶ್ - ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! - 41:58 14 ರಾಜೇಂದ್ರ ಕಾರಂತ - ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? - 45:08 15 ಸಂಚಾರಿ ವಿಜಯ್ - ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ...