ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ. ಸಂವಿ ಹೇಳಿಕೊಟ್ಟ ಪಾಠಗಳು ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ. ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ. ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ...