ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ.
ಸಂವಿ ಹೇಳಿಕೊಟ್ಟ ಪಾಠಗಳು
ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ. ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ.
ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ಮಾಡಿ ಏನೂ ಆಗಿರದ ಹಾಗೆ ಇಡೀ ಸನ್ನಿವೇಶವನ್ನ ನಿಭಾಯಿಸಿದ್ದು ನೋಡಿ ನಿಬ್ಬೆರಗಾಗಿದ್ದೆ. ಕೋಪ ಒಂದೇ ಕ್ಷಣ ಸಾರ್ ಯಾರಿಗೂ ನಿಮ್ ಕೋಪದ ಮುಖ ನೆನಪಲ್ಲಿರಲ್ಲ, ನಗು ಮುಖ ಒಂದೇ. ರಾಷ್ಟ್ರಪ್ರಶಸ್ತಿ ಗೆದ್ದ ಮುಂಚೆ ಹೇಗಿದ್ದ್ನೋ ಗೆದ್ದು ದೇಶದ ಪ್ರೀತಿ ಗಳಿಸಿ ಬಂದಮೇಲೂ ಹಾಗೇ ಇದ್ದ.
ಶ್ರಧ್ದೆ, ಭಕ್ತಿಯಿಂದ ಸಂವಿ ಮಾಡುತ್ತಿದ್ದ ರಂಗ ಚಟುವಟಿಕೆಗಳು ಆಶ್ಚರ್ಯ ತರಿಸುತ್ತಿತ್ತು. ಯಾವುದೇ ಸಣ್ಣಕೆಲಸವಾಗಿರಲಿ ಯಾವತ್ತೂ ಸಮಯ ಮೀರಿದ್ದಿಲ್ಲ, ಒಂದೇ ಒಂದು ದಿನ ತಾಲೀಮಿಗೆ ಲೇಟಾಗಿ ಬರುತ್ತಿರಲಿಲ್ಲ. ನಾಟಕದ ಮುನ್ನಾ ನಡೆಯುತ್ತಿದ್ದ ಪ್ರಾರ್ಥನೆಯನಂತರ ಪಾತ್ರ ಪ್ರವೇಶ ಮಾಡಿದರೆ ಮುಗಿಯಿತು, ಯಾರು ಏನೀ ಕೋತಿಕೆಲಸ ಮಾಡುತ್ತಿದ್ದರೂ ತನ್ನ ಪಾಡಿಗೆ ತನ್ನ ಪಾತ್ರದ ಬಗ್ಗೆ ಗಮನವಿಟ್ಟು ನಾಟಕ ಮುಗಿಯುವ ವರೆವಿಗೂ ಹಾಗೇ ಪಾತ್ರದಲ್ಲೆ ಇರುತ್ತಿದ್ದ. ಶಿಸ್ತು ಮತ್ತೆ ಅದಕ್ಕೆ ತಕ್ಕ ಸಂಯಮ ಹುಟ್ಟಿನಿಂದಲೇ ಬಂದಿತ್ತು ಅನ್ನಿಸುತ್ತೆ.
ಮಗುವಿನಂತ ನಿಷ್ಕಲ್ಮಷ ಪ್ರೀತಿ, ಎಲ್ಲರಬಗ್ಗೆ ಕೂಡ, ಪ್ರತೀ ಸಲ ನನ್ನ ಮಾತಾಡಿಸಿದಾಗ ನನ್ನ ಮಕ್ಕಳ ಬಗ್ಗೆ ಕೇಳದೇ ಇರುತ್ತಿರಲಿಲ್ಲ. ಹೇಗಿದ್ದಾರೆ ಮಕ್ಕಳು ಅಂತಲೇ ಮಾತು ಶುರುಮಾಡುತ್ತಿದ್ದದು. ಮಕ್ಕಳ ಬಗ್ಗೆ ವಿಷೇಶ ಪ್ರೀತಿ ಹೊಂದಿದ್ದ ಸಂವಿ ಎಂಥಾ ಹಠಮಾಡೋ ಮಕ್ಕಳನ್ನು ನಿರಾಯಾಸವಾಗಿ ಹದಕ್ಕೆ ತರುತ್ತಿದ್ದ. ಅವನ ಜೊತೆ ಮಕ್ಕಳು ಕೂಡ ಅಷ್ಟೇ ಆಪ್ಯಾಯತೆ ಹೊಂದಿದ್ದವು. ಮಕ್ಕಳ ಜೊತೆ ಕೆಲಸ ಮಾಡಲು ಬೇಕಾಗಿದ್ದ ಎಲ್ಲಾ ಕೌಶಲ್ಯ ಅವನು ಹೊಂದಿದ್ದ. ಮಕ್ಕಳೊಂದಿಗೆ ಮಕ್ಕಳಾಗೋ ಗುಣ ಆತನಿಗೆ ಸಿದ್ಧಿಸಿದಂತೆ ಬೇರೆಯವರಿಗೆ ಸಿದ್ದಿಸಿದ್ದು ನಾನಂತೂ ನೋಡಿಲ್ಲ.
ಇದು ಸ್ವಲ್ಪ ವಿಚಿತ್ರ ಅನ್ನಿಸಬಹುದು, ಆದರೆ ನಿಜ. ಒಮ್ಮೆ ನಮಗಿಬ್ಬರಿಗೂ ಗೊತ್ತಿರೋ ಒಂದೆರಡು ಸ್ನೇಹಿತರು ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿ ಬಂದಿದ್ದರು. ನಾನು ಮುಲಾಜಿಲ್ಲದೆ ಅವರಿಬ್ಬರಿಗೂ ಬೈತಿದ್ದೆ, ಅವರೂ ಯಾಕೆ ತಪ್ಪಾಯಿತು ಅಂದಾಗ ನಾನು ತಪ್ಪು ತಪ್ಪೇ ಎಂದು ಬೈಯ್ಯುವುದನ್ನು ಮುಂದುವರೆಸಿದೆ. ಆಗ ಸಂವಿ ನನಗೆ ತಡೆಯಲು ಹೇಳಿ, ತಪ್ಪಿಂದ ಆಗಬಹುದಾದ ಸರಣಿ ಅವಘಡಗಳನ್ನ ಅವಲೋಕಿಸಿ ಅವರಿಬ್ಬರಿಗೆ ಅವರ ತಪ್ಪಿನ ನಿಜವಾದ ಅರಿವು ಮೂಡಿಸಿದ. ನನಗೆ ಆಗ ಅನ್ನಿಸಿದ್ದು ಇದು ಸರಿ, ತಪ್ಪು ತಪ್ಪೇ ಅನ್ನೋದಕ್ಕಿಂತ ತಪ್ಪು ಯಾಕೆ ಮಾಡಬಾರದು ಎನ್ನೋ ಅರಿವು ಶ್ರೇಷ್ಠ ಅಂತ.
ಸ್ನೇಹಕ್ಕೆ ಪ್ರಾಣ ಕೊಡೊ ಬುದ್ಧಿ, ನಮ್ಮ ಸಂಜೆ ವಹಿವಾಟು ಮುಗಿದಮೇಲೆ ಎಲ್ಲರೂ ಮನೆ ಸೇರಿದರೋ ಇಲ್ಲವೋ ಅನ್ನೊ ಮೆಸೇಜ್ ಸಂವಿಗೆ ಬಹಳಾ ಮುಖ್ಯ ಆಗುತ್ತಿತ್ತು. ಗಾಡಿ ಇಲ್ಲದವರಿಗೆ ತನ್ನ ದಾರಿಯಿಂದ ಎಷ್ಟೇ ದೂರ ಇದ್ದರೂ ಹೋಗಿ ಡ್ರಾಪ್ ಮಾಡಿ ಬರೋ ಉದಾರಿ. ಹಾಗೆ ಇದ್ದ ಕಕುಲಾತಿ ಕಡಿಮೆ ಆಗಲೇ ಇಲ್ಲ, ಕೊನೆವರೆವಿಗೂ ಸ್ನೇಹಿತರಿಗೆ ಸಹಾಯ ಮಾಡುತ್ತಲೇ ಇದ್ದ. ಕೊಟ್ಟ ಸಾಲ ವಾಪಸ್ ಬರಲ್ಲ ಅಂತ ಗೊತ್ತಿದ್ದರೂ ಸಾಲ ಕೊಡುತ್ತಿದ್ದ. ಬೆನ್ನ ಹಿಂದೆ ಬೇರೆ ಮಾತು ಆಡೊ ಗೋಮುಖ ವ್ಯಾಘ್ರಗಳಿಗೂ ಸಹಾಯಹಸ್ತ ನೀಡುತ್ತಿದ್ದ. ಈ ವಿಷಯದಲ್ಲಿ ಆತ ಯಾರ ಮಾತು ಕೇಳಿದ್ದು ನನಗೆ ನೆನಪಿಲ್ಲ.
ಕೊನೆಯದಾಗಿ ನಗು. ಎಲ್ಲಾ ಸಮಯದಲ್ಲೂ, ಎಲ್ಲಾ ಸಂಧರ್ಭಗಳಲ್ಲೂ, ಎಲ್ಲಾ ಸ್ಥಳಗಳಲ್ಲು, ಸಂವಿ ಎಂದರೆ ನನಗೆ “ನಗು”. ಆ ನಗು ಎಂದೆಂದಿಗೂ ಹಸಿರು, ಅದಕ್ಕೆ ಸಾವಿಲ್ಲ. ಆ ನಗು ಎಷ್ಟೋ ಮನಗಳನ್ನು ಗೆದ್ದಿದೆ, ಎಷ್ಟೋ ಯುದ್ದಗಳನ್ನು ಒಂದೇ ಒಂದು ಹೊಡೆತವಿಲ್ಲದೆ ಗೆದ್ದಿದೆ. ನಗುವಿನ ಸಾಮ್ರಾಟ ಸಂವಿ, ನಮಗೆ ಇಂದಿಗೂ ಸಂವಿ ಸುತ್ತ ಮುತ್ತ ಇದ್ದಾನೆ ಅನಿಸಲು ಕಾರಣವೇ ಆ ನಗು. ಸಂವಿ ನಗುವನ್ನು ಮರೆಸಲು ಯಾರಿಂದಲೂ ಸಾಧ್ಯವಿಲ್ಲ. ಸಂವಿ ಆ ನಗುವಿನಿಂದ ಚಿರಂಜೀವಿ.

Comments
Post a Comment
Tell me what you think...