ಈಗಿನ ಕಾಲದಲ್ಲಿ ಅಭಾವ ಎನ್ನುವ ಪದದ ಅರ್ಥ ಬದಲಾಗಿದೆ. ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವ ಅಭಾವವೆಂದರೆ ಸಮಯದ್ದು. ಎರಡುಬಾರಿ ಯೋಚನೆಮಾಡಿ ಮಾತನಾಡಲೂ ಆಗದ ಈ ಕಾಲದಲ್ಲಿ, ಹೇಳಿದ ನಂತರ ಆದ ಗಲಭೆಯನ್ನು ನಿಯಂತ್ರಿಸುವ ಸಮಯದ ಲೆಕ್ಕ ಯಾರು ತಾನೆ ಇಡುತ್ತಾರೆ ಹೇಳಿ. ನಾವು ಚಿಕ್ಕವರಿದ್ದಾಗ ಸಮಯಕ್ಕೆ ಎಂದೂ ಅಭಾವವಿರಲಿಲ್ಲ, ನಮಗೆ ತಿನ್ನಲು, ಆಡಲು, ಓದಲು ಎಲ್ಲವುದಕ್ಕೂ ಸಮಯವಿರುತ್ತಿತ್ತು. ಈಗಿನ ಕಾಲದಲ್ಲಿ ನಮಗೆ ಸೀರಿಯಲ್ ನೋಡೋದಕ್ಕೇ ಸಮಯ ಇರೋದಿಲ್ಲ್ಲ, ಇದಕ್ಕೆ ಅನುಗುಣವಾಗಿ ನಮ್ಮನ್ನು ಹಾಳುಗೆಡವಲು ಅನೇಕಾನೇಕ ಕೊಳ್ಳುಬಾಕತನವೆಂಬ ರಂಭೆ, ಸೋಂಬೇರಿತನವೆಂಬ ಊರ್ವಶಿ, ಸುಖದ ಸೋಪಾನದಲ್ಲಿ ಮಲಗಿಸುವ ಸವಲತ್ತುಗಳು ಎಂಬ ಮೇನಕೆಯರು, ನಮ್ಮ ಜೀವನದ ಸಮತೋಲನದ ತಪಸ್ಸನ್ನು ಏರು ಪೇರು ಮಾಡಲು ಕಾಯುತ್ತಿರುತ್ತವೆ. ಅಭಾವಗಳನ್ನೇ ಬಂಡವಾಳಮಾಡಿಕೊಂಡಿರೋ ಉದ್ದಿಮೆಗಳೇ ಹೆಸರುಮಾಡುತ್ತಿರುವ ಈ ಸಮಯದಲ್ಲಿ, ಮನೆ ಕೆಲಸಗಾರರು ಸಿಗದಿದ್ದರೇನಂತೆ, ನಿಮ್ಮನ್ನು ಇನ್ನಷ್ಟು ಸೋಂಬೇರಿಯನ್ನಾಗಿ ಮಾಡಲು ಯಂತ್ರೋಪಕರಣಳು ಬೇರೆ. ಬೆಳಿಗ್ಗೆ ಒಮ್ಮೆ ಅಡುಗೆ ಮಾಡಿದರೆ ಸಾಕು ಮಾರನೆದಿನ ಬೆಳಿಗ್ಗೆವರೆಗು ಯೋಚನೆ ಮಾಡೊಹಾಗಿಲ್ಲ. ತಂಗಳನ್ನು ಬಿಸಿಮಾಡಲು ಮೈಕ್ರೋವೇವ್ ಒವನ್, ಬೇಗ ಅಡುಗೆ ಮಾಡಲು ರೆಡಿಮಿಕ್ಸ್‍ಗಳು, ಅಡುಗೇನೇ ಮಾಡಲು ಬೇಜಾರೇ ಯೋಚನೇನೇ ಮಾಡಬೇಡಿ ಕೆ.ಜಿ.ಲೆಕ್ಕದಲ್ಲಿ ಅಡುಗೆ ಸಿಗತ್ತೆ. ಹಬ್ಬ ಹರಿದಿನವೇ? ಅದಕ್ಕೂ ಯೋಚನೆ ಬೇಡ, ಮನೆಗೆ ಶಾಸ್ತ್ರಿಗಳು ಬರೋದು, ಅವರಿಗ...